HomeNationalPahalgam Attack: ಪಹಲ್ಗಾಮ್ ದಾಳಿ: ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ರಕ್ತಪಾತ – ಉಗ್ರರ ಕೃತ್ಯದ ಹಿಂದಿನ...

Pahalgam Attack: ಪಹಲ್ಗಾಮ್ ದಾಳಿ: ಭೂಲೋಕದ ಸ್ವರ್ಗ ಕಾಶ್ಮೀರದಲ್ಲಿ ರಕ್ತಪಾತ – ಉಗ್ರರ ಕೃತ್ಯದ ಹಿಂದಿನ ಕರಾಳ ಸತ್ಯ!

Pahalgam Attack – ಜಮ್ಮು ಮತ್ತು ಕಾಶ್ಮೀರವನ್ನು ಪ್ರವಾಸಿಗರ ಸ್ವರ್ಗವೆಂದು ಬಣ್ಣಿಸಲಾಗುತ್ತದೆ. ಆದರೆ, ದುರಾದೃಷ್ಟವಶಾತ್ ಕೆಲವು ವರ್ಷಗಳ ಹಿಂದೆ ಇಲ್ಲಿ ಉಗ್ರರ ಅಟ್ಟಹಾಸ ಮೆರೆದಿದ್ದರಿಂದ ಪ್ರವಾಸಿಗರು ಕಾಲಿಡಲು ಹಿಂದೇಟು ಹಾಕುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಾಶ್ಮೀರಿ ಪಂಡಿತರು, ಸ್ಥಳೀಯರು ಮತ್ತು ಪ್ರವಾಸಿಗರು ಭಯದ ವಾತಾವರಣದಲ್ಲಿ ಬದುಕುವಂತಾಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಕಾಶ್ಮೀರ ಮತ್ತೆ ತನ್ನ ನೈಸರ್ಗಿಕ ಸೊಬಗಿನಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿತ್ತು. 370ನೇ ವಿಧಿ ರದ್ದತಿಯ ನಂತರವಂತೂ ಪ್ರವಾಸೋದ್ಯಮ ಹೊಸ ಚಿಗುರು ಕಂಡಿತ್ತು. ದೇಶ ವಿದೇಶಗಳಿಂದ ಪ್ರವಾಸಿಗರು ಹಿಮಪಾತ ಮತ್ತು ಪ್ರಕೃತಿಯ ರಮಣೀಯತೆಯನ್ನು ಸವಿಯಲು ಆಗಮಿಸುತ್ತಿದ್ದರು. ಹಿಮದ ಹೊದಿಕೆಯಿಂದ ಕಂಗೊಳಿಸುತ್ತಿದ್ದ ಕಾಶ್ಮೀರದ ಕಣಿವೆಯಲ್ಲಿ ಇಂದು ರಕ್ತದೋಕುಳಿ ಹರಿದಿದೆ. ಪುಲ್ವಾಮಾ ದಾಳಿಯ ನಂತರ ಭಾರತದಲ್ಲಿ ನಡೆದ ಅತಿದೊಡ್ಡ ಉಗ್ರರ ದಾಳಿ ಇದಾಗಿದೆ.

Pahalgam - Bloodshed in Kashmir’s Pahalgam Valley after a deadly terrorist attack on tourists

Pahalgam Attack – ಧಾಳಿಯಲ್ಲಿ 20 ಕ್ಕೂ ಹೆಚ್ಚು ಮಂದಿ ಬಲಿ?

ತಮ್ಮ ಕುಟುಂಬದೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯಲು ಬಂದಿದ್ದವರು, ಮಧುಚಂದ್ರಕ್ಕೆಂದು ಆಗಮಿಸಿದ್ದ ನವಜೋಡಿಗಳು – ಎಲ್ಲರಿಗೂ ಈ ದಿನ ಕರಾಳ ನೆನಪಾಗಿ ಉಳಿಯಲಿದೆ. ಕಾಶ್ಮೀರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಕಣಿವೆಯಲ್ಲಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ 20ಕ್ಕೂ ಹೆಚ್ಚು ಅಮಾಯಕ ಜೀವಗಳು ಬಲಿಯಾಗಿವೆ. ಪ್ರವಾಸಿಗರು ಏನು ನಡೆಯುತ್ತಿದೆ ಎಂದು ಅರಿಯುವಷ್ಟರಲ್ಲಿ ಉಗ್ರರು ಅವರ ಹಣೆಗೆ ಗುಂಡಿಕ್ಕಿ ಕೊಂದಿದ್ದಾರೆ. ದಿ ರೆಸಿಸ್ಟೆನ್ಸ್ ಫೋರ್ಸ್ (ಟಿಆರ್ಎಫ್) ಎಂಬ ಉಗ್ರ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿದೆ. ಲಷ್ಕರ್-ಎ-ತೊಯ್ಬಾದ ಅಂಗಸಂಸ್ಥೆ ಎಂದು ಹೇಳಲಾದ ಈ ಸಂಘಟನೆ, ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ನಂತರ ಅಸ್ತಿತ್ವಕ್ಕೆ ಬಂದಿದೆ ಎನ್ನಲಾಗಿದೆ.

Pahalgam Attack  – ಪಹಲ್ಗಾಮ್ ಎಲ್ಲಿದೆ? ಅದರ ಪ್ರಾಮುಖ್ಯತೆ ಏನು?

ಜಮ್ಮು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯ ಮೇಲಿರುವ ಸುಂದರವಾದ ಹುಲ್ಲುಗಾವಲು ಪ್ರದೇಶವಿದು. ದಟ್ಟವಾದ ಕಾಡುಗಳು, ತಿಳಿ ಸ್ಪಟಿಕದಂತಹ ಸರೋವರಗಳು ಮತ್ತು ವಿಶಾಲವಾದ ಹಸಿರಿನಿಂದ ಕೂಡಿದ ಪಹಲ್ಗಾಮ್ ಪ್ರಮುಖ ಪ್ರವಾಸಿ ತಾಣವಾಗಿದೆ. ರಸ್ತೆಯಿಂದ ಎತ್ತರದಲ್ಲಿರುವ ಈ ಪ್ರದೇಶಕ್ಕೆ ಕಾಲ್ನಡಿಗೆಯಲ್ಲಾಗಲಿ ಅಥವಾ ಕುದುರೆಯ ಮೇಲಾಗಲಿ ಹೋಗಬೇಕಾಗುತ್ತದೆ. ವಾಹನ ಸಂಚಾರ ಇಲ್ಲಿಗೆ ಸಾಧ್ಯವಿಲ್ಲ. ಇಂದು ಮಧ್ಯಾಹ್ನ 1.30 ರಿಂದ 2 ಗಂಟೆಯ ಸುಮಾರಿಗೆ ಪ್ರವಾಸಿಗರು ಹೋಟೆಲ್‌ನ ಹೊರಗೆ ಕುಳಿತು ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸುತ್ತಿದ್ದಾಗ, ಇದ್ದಕ್ಕಿದ್ದಂತೆ ಉಗ್ರರು ಎಲ್ಲೆಡೆಯಿಂದಲೂ ಮುತ್ತಿಗೆ ಹಾಕಿ ಗುಂಡಿನ ಮಳೆಗರೆದಿದ್ದಾರೆ. ಪ್ರವಾಸಿಗರಿಗೆ ತಪ್ಪಿಸಿಕೊಳ್ಳಲು ಅಥವಾ ಅಡಗಿಕೊಳ್ಳಲು ಯಾವುದೇ ಅವಕಾಶವಿರಲಿಲ್ಲ. ಸಿಕ್ಕ ಸಿಕ್ಕವರ ಮೇಲೆ ಗುಂಡು ಹಾರಿಸಿದ ಉಗ್ರರು ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

Pahalgam - Bloodshed in Kashmir’s Pahalgam Valley after a deadly terrorist attack on tourists

Pahalgam Attack – ಪ್ರವಾಸಿಗರ ನೋವು ಹೇಳತೀರದು

ಹೊಸದಾಗಿ ಮದುವೆಯಾದ ಜೋಡಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಮ್ಮ ಹೆತ್ತವರು, ಸಂಗಾತಿ ಮತ್ತು ಮಕ್ಕಳೊಂದಿಗೆ ಕಾಶ್ಮೀರದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಬಂದಿದ್ದವರು, “ಯಾಕಾದರೂ ಇಲ್ಲಿಗೆ ಬಂದೆವೋ” ಎಂದು ಗೋಳಾಡುತ್ತಾ ಸಹಾಯಕ್ಕಾಗಿ ಅಂಗಲಾಚುತ್ತಿದ್ದರು. ಜೀವನದಲ್ಲಿ ಒಮ್ಮೆಯಾದರೂ ಕಾಶ್ಮೀರಕ್ಕೆ ಭೇಟಿ ನೀಡಬೇಕೆಂಬ ಆಸೆಯೊಂದಿಗೆ ಬಂದಿದ್ದ ವೃದ್ಧರು ಗಾಯಗೊಂಡು ನೋವಿನಿಂದ ನರಳುತ್ತಿದ್ದರು. ಕೆಲವೇ ನಿಮಿಷಗಳ ಹಿಂದೆ ಸ್ವರ್ಗದಂತೆ ಕಾಣುತ್ತಿದ್ದ ಆ ಕಣಿವೆ, ಅರ್ಧ ಗಂಟೆಯೊಳಗೆ ರಕ್ತ, ಹರಿದ ಬಟ್ಟೆಗಳು, ಕಿರುಚಾಟ ಮತ್ತು ಗೋಳಾಟದಿಂದ ತುಂಬಿಹೋಗಿತ್ತು. ಅಲ್ಲಿದ್ದ ಕೆಲವರು ಆ ಭಯಾನಕ ದೃಶ್ಯಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಆ ದೃಶ್ಯಗಳನ್ನು ನೋಡಿದರೆ ಕಲ್ಲು ಹೃದಯದವರಿಗೂ ಕಣ್ಣೀರು ಬಾರದಿರದು. “ನನ್ನ ಗಂಡನನ್ನು ಹೇಗಾದರೂ ಉಳಿಸಿಕೊಡಿ” ಎಂದು ನವವಿವಾಹಿತೆಯೊಬ್ಬಳು ರಕ್ತದ ಮಡುವಿನಲ್ಲಿ ಬಿದ್ದ ತನ್ನ ಪತಿಯ ಪಕ್ಕ ಕುಳಿತು ಅಸಹಾಯಕಳಾಗಿ ಗೋಳಾಡುತ್ತಿದ್ದ ದೃಶ್ಯವನ್ನು ಯಾರೂ ಮರೆಯಲು ಸಾಧ್ಯವಿಲ್ಲ.

Pahalgam Attack – ಧರ್ಮ ಕೇಳಿ ಗುಂಡಿನ ದಾಳಿ ಮಾಡಿದ್ರು

ಪಹಲ್ಗಾಮ್ ಕಣಿವೆಯಲ್ಲಿದ್ದ ಪ್ರವಾಸಿಗರ ಪ್ರಕಾರ, ದಾಳಿಕೋರರು “ನಿಮ್ಮ ಧರ್ಮ ಯಾವುದು?” ಎಂದು ಕೇಳುತ್ತಿದ್ದರು. ಹಿಂದೂ ಮತ್ತು ಇತರೇ ಧರ್ಮದವರನ್ನು ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಮುಸ್ಲಿಮರ ಮೇಲೆ ಗುಂಡು ಹಾರಿಸಿಲ್ಲ ಎನ್ನಲಾಗಿದೆ. ಅಲ್ಲಿದ್ದವರ ಗುರುತಿನ ಚೀಟಿಗಳನ್ನು ಪರಿಶೀಲಿಸಿದ ಉಗ್ರರು, ಕೆಲವರ ಪ್ಯಾಂಟ್ ತೆಗೆಯಲು ಹೇಳಿದ್ದಾರೆ ಮತ್ತು ಇನ್ನು ಕೆಲವರ ಬಳಿ ಕಲ್ಮಾ ಪಠಿಸಲು ಸೂಚಿಸಿದ್ದಾರೆ. ಅವರು ಮುಸ್ಲಿಮರಲ್ಲ ಎಂದು ಖಚಿತವಾದ ನಂತರ ಗುಂಡು ಹಾರಿಸಿದ್ದಾರೆ ಎಂಬುದು ಅಘಾತಕಾರಿ ಸಂಗತಿ.

Pahalgam - Bloodshed in Kashmir’s Pahalgam Valley after a deadly terrorist attack on tourists

Pahalgam Attack – “ಹೋಗಿ, ಮೋದಿಗೆ ಹೇಳಿ!” – ಸಂತ್ರಸ್ತೆಯ ಆಕ್ರಂದನ

ಕರ್ನಾಟಕದ ಶಿವಮೊಗ್ಗದ ಉದ್ಯಮಿ ಮಂಜುನಾಥ್ ಅವರು ತಮ್ಮ ಪತ್ನಿ ಪಲ್ಲವಿ ಮತ್ತು ಮಗನೊಂದಿಗೆ ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು. ದುರಾದೃಷ್ಟವಶಾತ್, ഇന്നಿನ ಗುಂಡಿನ ದಾಳಿಯಲ್ಲಿ ಮಂಜುನಾಥ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಘಟನೆಯನ್ನು ವಿವರಿಸಿದ ಅವರ ಪತ್ನಿ ಪಲ್ಲವಿ, “ನಾವು ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದಾಗ ಉಗ್ರರು ಸುತ್ತುವರೆದು ಗುಂಡು ಹಾರಿಸಲು ಪ್ರಾರಂಭಿಸಿದರು. ಆಗ ಮಧ್ಯಾಹ್ನ 1.30 ಇರಬಹುದು. ನನ್ನ ಕಣ್ಣೆದುರೇ ನನ್ನ ಗಂಡ ಪ್ರಾಣ ಬಿಟ್ಟರು. ಅವರ ಹಣೆಗೆ ಉಗ್ರರು ಗುಂಡು ಹಾರಿಸಿದ್ದರು. ಆಗ ನಾನು ಅವರ ಬಳಿ ನನ್ನನ್ನೂ ಕೊಂದುಬಿಡಿ ಎಂದು ಹೇಳಿದೆ. ಅದಕ್ಕೆ ಅವರೆಲ್ಲೊಬ್ಬ ನಿನ್ನನ್ನು ಕೊಲ್ಲುವುದಿಲ್ಲ, ಹೋಗಿ ಇದನ್ನೆಲ್ಲ ಮೋದಿಗೆ ಹೇಳು ಎಂದು ಹೇಳಿದ. ನಂತರ ಅಲ್ಲಿದ್ದ 2-3 ಸ್ಥಳೀಯರು ಬಂದು ನಮ್ಮನ್ನು ರಕ್ಷಿಸಿ ಕರೆದುಕೊಂಡು ಬಂದರು” ಎಂದು ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : Mobile Settings : ಎಚ್ಚರಿಕೆ! ನಿಮ್ಮ ಮೊಬೈಲ್‌ನಲ್ಲಿ ಈ ಅಪಾಯಕಾರಿ ಸೆಟ್ಟಿಂಗ್ಸ್ ಇದ್ಯಾ? ತಕ್ಷಣ ಬದಲಾಯಿಸಿ! ಇಲ್ಲದಿದ್ದರೆ ನಿಮ್ಮ ಖಾಸಗಿ ಮಾತುಕತೆ ರೆಕಾರ್ಡ್ ಆಗಬಹುದು?

Pahalgam Attack  – ಸಹಾಯವಾಣಿ ತೆರೆಯಲಾಗಿದೆ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿಯ ಹಿನ್ನೆಲೆಯಲ್ಲಿ, ಅನಂತನಾಗ್ ಪೊಲೀಸರು ಸಹಾಯವಾಣಿಯನ್ನು ಪ್ರಾರಂಭಿಸಿದ್ದಾರೆ. ಮಾಹಿತಿಗಾಗಿ 9596777669, 01932225870, 9419051940 ಈ ಸಹಾಯವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಈಗಾಗಲೇ ಇಬ್ಬರು ವಿದೇಶಿಯರು ಸೇರಿದಂತೆ 26ಕ್ಕೂ ಹೆಚ್ಚು ಜನರು ಈ ಭೀಕರ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಕೇಂದ್ರ ಸಚಿವರು ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಕಾಶ್ಮೀರಕ್ಕೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸುತ್ತಿದ್ದಾರೆ. ಮೃತರ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾಶ್ಮೀರದಲ್ಲಿನ ಈ ಉಗ್ರರ ಕೃತ್ಯದಿಂದಾಗಿ ಕೇವಲ ಪ್ರವಾಸಿಗರು ಮಾತ್ರವಲ್ಲದೆ ಅಲ್ಲಿನ ಸ್ಥಳೀಯ ನಿವಾಸಿಗಳು ಕೂಡ ಆತಂಕಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -

Most Popular