E-Khata – ಸಮರ್ಪಕ ದಾಖಲೆ ಇಲ್ಲದ ಆಸ್ತಿಗಳ ಮಾಲೀಕರು ನೇರವಾಗಿ ಇ-ಖಾತಾ ಮಾಡಿಸಿಕೊಳ್ಳುವ ಹಾಗೂ ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿ ಜನತೆಗೆ ಅನುಕೂಲ ಮಾಡುವ ಉದ್ದೇಶದಿಂದ ಇ-ಖಾತಾ ಆಂದೋಲನ ಕಾರ್ಯಕ್ರಮದ ಮೂಲಕ 3 ತಿಂಗಳ ಕಾಲ ಅವಕಾಶವನ್ನು ಕಲ್ಪಿಸಿದೆ ಈ ಅವಕಾಶವನ್ನು ಸದ್ಭಳಕೆ ಮಾಡಿಕೊಳ್ಳಿ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಪುರಸಭೆ ಆವರಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಇ-ಖಾತಾ (E-Khata) ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸಮರ್ಪಕವಾದ ದಾಖಲೆಗಳಿಲ್ಲದ ಆಸ್ತಿ ಮಾಲೀಕರು ಸ್ಥಳೀಯ ಸಂಸ್ಥೆಗಳಲ್ಲಿ ಇ-ಖಾತೆ ಮಾಡಿಸಲು ಸರ್ಕಾರಿ ಕಚೇರಿಗಳ ಸುತ್ತ ಅಲೆದಾಡುವುದರ ಜೊತೆಗೆ ಮಧ್ಯವರ್ತಿಗಳ ಸುಳಿಯಲ್ಲಿ ಸಿಲುಕಿ ತೊಂದರೆ ಅನುಭವಿಸುತ್ತಿದ್ದರು. ಅಲ್ಲದೆ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿಯ ಮಾಲೀಕರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿದರೂ ಸಹ ಖಾತೆ ಇಲ್ಲದ ಪರಿಣಾಮ ಸ್ಥಳೀಯ ಸಂಸ್ಥೆಗಳಿಗೆ ತೆರಿಗೆ ಸಂಗ್ರಹ ಆಗುತ್ತಿಲ್ಲ.
ಇದನ್ನು ಮನಗೊಂಡ ನಮ್ಮ ಸರ್ಕಾರ ನಾಡಿನ ಜನತೆಯ ಅನುಕೂಲಕ್ಕಾಗಿ ಇ-ಖಾತಾ (E-Khata) ಅಭಿಯಾನಕ್ಕೆ ಫೆ.19ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಚಾಲನೆ ನೀಡಿದ್ದು ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವಂತಹ ಅನಧಿಕೃತ ಆಸ್ತಿಗಳಿಗೆ ಇ-ಖಾತೆ ಮಾಡಿಸಿಕೊಳ್ಳಲು 3 ತಿಂಗಳು ಅವಕಾಶವನ್ನು ನೀಡಿದೆ. ಖಾತೆ ಮಾಡಿಸಿಕೊಳ್ಳಲು ಯಾವುದೇ ಮಧ್ಯವರ್ತಿಗಳ ಬಳಿ ಹೋಗದೆ ಖಾತಾ ಅಭಿಯಾನದ ಮೂಲಕ ನೇರವಾಗಿ ಆಸ್ತಿ ಮಾಲೀಕರು ಸ್ಥಳೀಯ ಸಂಸ್ಥೆಗಳ ಕಚೇರಿಗೆ ಹೋಗಿ ದಾಖಲೆಗಳನ್ನು ಸಲ್ಲಿಸಿ ಇ-ಖಾತೆ ಪಡೆಯಬಹುದಾಗಿದೆ. ಸರ್ಕಾರ ನೀಡಿರುವ ಈ ಅವಕಾಶವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಬಾಗೇಪಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್ ಮಾತನಾಡಿ, ಇ-ಖಾತಾ (E-Khata) ಅಭಿಯಾನದ ಮೂಲಕ ನೇರವಾಗಿ ಪುರಸಭೆ ಕಚೇರಿಗೆ ಬಂದು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿ, ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ನಿಮ್ಮ ಆಸ್ತಿಯ ಇ-ಖಾತೆ ಮಾಡಿಕೊಡಲಾಗುವುದು. ಪುರಸಭೆ ವ್ಯಾಪ್ತಿಯ ಸುಮಾರು 550ಕ್ಕೂ ಹೆಚ್ಚು ಆಸ್ತಿಯ ಮಾಲೀಕರು ಅರ್ಜಿಯನ್ನು ದಾಖಲೆಗಳೊಂದಿಗೆ ಸಲ್ಲಿಸಿದ್ದಾರೆ ಎಂದ ಅವರು ಸರ್ಕಾರ ನೀಡಿರುವ 3 ತಿಂಗಳ ಅವಧಿಯ ಅವಕಾಶವನ್ನು ಸಾರ್ವಜನಿಕರು ಸುದುಪಯೋಗಪಡಿಸಕೊಳ್ಳುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಉಪಾಧ್ಯಕ್ಷೆ ಸುಜಾತಮ್ಮ, ಸದಸ್ಯರಾದ ಎ.ನಂಜುಂಡಪ್ಪ, ಜಭೀವುಲ್ಲಾ, ರೇಷ್ಮಾಭಾನು, ಸರೋಜಮ್ಮ ಸಿಬ್ಬಂದಿಗಳಾದ ಅತಾವುಲ್ಲಾ, ಕೃಷ್ಣಪ್ಪ, ಮಹ್ಮದ್ ಪೀರ್, ಮತ್ತಿತರರು ಇದ್ದರು.