ಗುಡಿಬಂಡೆ: ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುವಂತಹ ಮಹಾನಟಿ ಎಂಬ ರಿಯಾಲಿಟಿ ಶೋನಲ್ಲಿ ಇತ್ತೀಚಿಗೆ ಶ್ರಮಿಕ ವರ್ಗಕ್ಕೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ, ಮಹಾನಟಿ ಶೋ, ನಿರ್ದೇಶಕ, ತೀರ್ಪುಗಾರರು ಹಾಗೂ ನಿರೂಪಕರ ವಿರುದ್ದ ಗುಡಿಬಂಡೆ ದ್ವಿಚಕ್ರ ವಾಹನಗಳ ಸಂಘದ ವತಿಯಿಂದ ಗುಡಿಬಂಡೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಈ ವೇಳೆ ಸಂಘದ ಅಪ್ಸರ್ ಪಾಷ ಮಾತನಾಡಿ, ಮಹಾನಟಿ ಎಂಬ ರಿಯಾಲಿಟಿ ಶೋ ನಲ್ಲಿ ಶ್ರಮಿಕ ವರ್ಗಕ್ಕೆ ಅವಮಾನ ಮಾಡುವಂತಹ ಸ್ಕಿಟ್ ಒಂದನ್ನು ಮಾಡಲಾಗಿದೆ. ಮ್ಯಾಕನಿಕ್ ನನ್ನು ಮದುವೆಯಾದರೇ ಗ್ರೀಸ್ ತಿಂದು ಬದುಕಲಾಗದು ಎಂಬ ಮಾತುಗಳನ್ನು ಸ್ಪರ್ಧಿ ಗಗನ ಎಂಬುವವರು ಆಡುತ್ತಾರೆ. ಈ ಮಾತಿನಿಂದ ವೃತ್ತಿಪರ ಮೆಕ್ಯಾನಿಕ್ ಸಮುದಾಯಕ್ಕೆ ತುಂಬಾ ನೋವಾಗಿದೆ. ಸಮಾಜದಲ್ಲಿ ಅಶಾಂತಿ ಉಂಟುಮಾಡುವ, ಸಮುದಾಯಗಳ ನಡುವೆ ದ್ವೇಷಭಾವನೆ ಬಿತ್ತುವ ಹಾಗೂ ಶ್ರಮಿಕರನ್ನು ಅವಮಾನಿಸಿದ್ದಂತಾಗಿದೆ. ಆದ್ದರಿಂದ ರಿಯಾಲಿಟಿ ಶೋ ಒಂದರ ನಿರ್ಮಾಪಕ, ನಿರ್ದೇಶಕ, ಸ್ಪರ್ಧಿ ಗಗನ, ನಿರೂಪಕಿ ಅನುಶ್ರೀ, ತೀರ್ಪುಗಾರರಾದ ನಟ ರಮೇಶ್ ಅರವಿಂದ್, ನಟಿ ಪ್ರೇಮಾ ಮತ್ತಿತರರ ವಿರುದ್ದ ಕಾನೂನು ರೀತ್ಯ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಬಳಿಕ ಸಂಘದ ಅಧ್ಯಕ್ಷ ನೂರುಲ್ಲಾ ಮಾತನಾಡಿ, ಮಹಾನಟಿ ಎಂಬ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿ ಮ್ಯಾಕನಿಕ್ನನ್ನು ಮದುವೆಯಾದರೆ ಗ್ರೀಸ್ ತಿಂದುಕೊಂಡು ಬದುಕಲಾಗದು ಎಂದಿದ್ದಾರೆ. ಈ ಮಾತಿನಿಂದ ವೃತ್ತಿಪರ ಮೆಕ್ಯಾನಿಕ್ ಸಮುದಾಯಕ್ಕೆ ನೋವಾಗಿದೆ. ಮೆಕ್ಯಾನಿಕ್ ಸಮುದಾಯ ಶ್ರಮಪಟ್ಟು ಕೆಲಸ ಮಾಡುತ್ತಾರೆ. ಹಗಲಿರುಳು ಬೆವರು ಸುರಿಸಿ ದುಡಿಯುತ್ತಾರೆ. ಹೀಗಾಗಿ ಶ್ರಮಿಕ ವರ್ಗದ ದುಡಿಮೆಯ ಬಗ್ಗೆ, ವೃತ್ತಿಯ ಬಗ್ಗೆ ಹೀಗೆ ತಿರಸ್ಕಾರದ ಹಾಗೂ ನಿಂದನಾತ್ಮಕ ಮಾತುಗಳು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಗುಡಿಬಂಡೆ ದ್ವಿಚಕ್ರ ವಾಹನಗಳ ಸಂಘದ ಕೃಷ್ಣಮೂರ್ತಿ, ಬಾಷ, ಫೈರೋಜ್, ಸಲ್ಮಾನ್, ರಿಯಾಜ್, ಸೋಹೇಬ್, ಹಸೇನ್, ದಾದು, ಜಬಿವುಲ್ಲಾ, ರಹಮತ್, ಜಬಿವುಲ್ಲಾ ಸೇರಿದಂತೆ ಹಲವರು ಇದ್ದರು.