Viral News – ಸ್ವಯಂ ಉದ್ಯೋಗ ಕಲ್ಪಿಸಿಕೊಂಡು ಆರ್ಥಿಕವಾಗಿ ಸದೃಢರಾಗಲು ಅನೇಕರು ಸಾಲ ಮಾಡಲು ಬ್ಯಾಂಕ್ ಗಳ ಮೊರೆ ಹೋಗುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕೋಳಿ ಫಾರಂ ಶುರು ಮಾಡಲು ಸಾಲಕ್ಕಾಗಿ ಬ್ಯಾಂಕ್ ಒಂದನ್ನು ಸಂಪರ್ಕ ಮಾಡಿದ್ದಾನೆ. ಬ್ಯಾಂಕ್ ಮ್ಯಾನೇಜರ್ ಸಹ ಸಾಲ ಮಂಜೂರು ಮಾಡುವುದಾಗಿ ಹೇಳಿ (Viral News) ಆತನಿಂದ ಬರೊಬ್ಬರಿ 39 ಸಾವಿರ ಮೌಲ್ಯದ ಚಿಕನ್ ಅನ್ನು ಹಂತ ಹಂತವಾಗಿ ಪಡೆದುಕೊಂಡು ಮೋಸ ಮಾಡಿದ್ದು, ಇದೀಗ ಬ್ಯಾಂಕ್ ಮ್ಯಾನೇಜರ್ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆಯಂತೆ. ಸದ್ಯ ಈ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಮೂಲಗಳ ಪ್ರಕಾರ ಈ ವಿಚಿತ್ರ ಘಟನೆ ಛತ್ತೀಸ್ ಗಡದ ಮಸ್ತೂರಿ ಪಟ್ಟಣದಲ್ಲಿ ನಡೆದಿದೆ ಎನ್ನಲಾಗಿದೆ. ಮಸ್ತೂರಿ ಪಟ್ಟಣದ ರೈತ ರೂಪಚಂದ್ ಮನ್ಹರ್ ಎಂಬಾತ ಈಗಾಗಲೇ ಕೋಳಿ ಫಾರಂ ಹೊಂದಿರುತ್ತಾನೆ. ತನ್ನ ವ್ಯವಹಾರವನ್ನು ಮತಷ್ಟು ವೃದ್ದಿಸಲು ರೂಪಚಂದ್ ಸ್ಥಳೀಯ ಎಸ್.ಬಿ.ಐ ಬ್ಯಾಂಕ್ ಶಾಖೆಗೆ ಭೇಟಿ ನೀಡಿ 12 ಲಕ್ಷ ಸಾಲಕ್ಕಾಗಿ ಕೇಳಿದ್ದಾನೆ. ಈ ವೇಳೆ ಬ್ಯಾಂಕ್ ಮ್ಯಾನೇಜರ್ ಸಾಲ ನೀಡುವುದಾಗಿಯೂ ಭರವಸೆ ನೀಡಿದ್ದಾನೆ. ಸಾಲ ನೀಡುವುದಾಗಿ ಭರವಸೆ ನೀಡಿದ ಮ್ಯಾನೇಜರ್ ತನಗೆ ಪ್ರತಿನಿತ್ಯ ಕೋಳಿ ಮಾಂಸ ತಂದುಕೊಡುವಂತೆ ಬೇಡಿಕೆಯಿಟ್ಟಿದ್ದನಂತೆ. ಅದರಂತೆ ರೈತ ರೂಪಚಂದ್ ಸಹ ಮ್ಯಾನೇಜರ್ ಗೆ ಕೋಳಿ ಮಾಂಸ ತಂದುಕೊಡುತ್ತಿದ್ದನಂತೆ.
ಸಾಲ ಮಂಜೂರಾಗುವ ಭರವಸೆಯಲ್ಲಿದ್ದ ರೂಪಚಂದ್ ಪ್ರತಿನಿತ್ಯ ಬ್ಯಾಂಕ್ ಮ್ಯಾನೇಜರ್ ಗೆ ಕೋಳಿ ಮಾಂಸದ ತಂದು ಕೊಡುತ್ತಿದ್ದ. ಅದರ ಜೊತೆಗೆ ಸಾಲಕ್ಕೆ 10% ಕಮಿಷನ್ ಸಹ ನೀಡಿದ್ದನಂತೆ. ಸಾಲ ಪಡೆಯಲು ಪ್ರತಿ ಶನಿವಾರ ಬೇರೆ ಕಡೆಯಿಂದ ಕೋಳಿ ಖರೀದಿಸುವುದು ರೈತನಿಗೆ ದಿನಚರಿಯಾಗಿದೆ. ಹೀಗೆ ಬರೊಬ್ಬರಿ 39 ಸಾವಿರ ಮೌಲ್ಯದ ಕೋಳಿ ಮಾಂಸವನ್ನು ಮ್ಯಾನೇಜರ್ ಗೆ ತಂದುಕೊಟ್ಟಿದ್ದಾನೆ. ಆದರೂ ಸಹ ರೈತನಿಗೆ ಮ್ಯಾನೇಜರ್ ಸಾಲ ನೀಡದೇ ಇದ್ದಾಗ, ತಾನು ಮೋಸ ಹೋಗುತ್ತಿರುವುದು ಅರಿವಾಗಿದೆ. ನಂತರ ಪೊಲೀಸರಿಗೆ ದೂರು ನೀಡಿದ್ದಾನೆ. ಜೊತೆಗೆ ತನಗೆ ಮೋಸ ಮಾಡಿದವರ ವಿರುದ್ದ ಕ್ರಮ ಕೈಗೋಳ್ಳದೇ ಇದ್ದರೇ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಸಹ ಹಾಕಿದ್ದಾನೆ ಎನ್ನಲಾಗಿದೆ. ಸದ್ಯ ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.