ಈ ಕಾಲದಲ್ಲಿ ಸ್ಮಾರ್ಟ್‌ಫೋನ್‌ನಲ್ಲಿ ಏನಾದರೂ ಆರ್ಡರ್ ಮಾಡಿದರೆ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಬರುತ್ತೆ. ಆದರೆ ಮದುವೆ ಕೂಡ ಅಷ್ಟೇ ವೇಗವಾಗಿ, ಕೇವಲ 20 ನಿಮಿಷದಲ್ಲಿ ಮುಗಿದು ಹೋಗುತ್ತೆ ಎಂದು ಯಾರಾದರೂ ಊಹಿಸಬಲ್ಲರಾ? ಹೌದು, ಉತ್ತರ ಪ್ರದೇಶದಲ್ಲಿ ನಡೆದ ಇಂಥದ್ದೊಂದು ವಿಚಿತ್ರ ಘಟನೆ ಈಗ ಎಲ್ಲರ ಹುಬ್ಬೇರಿಸಿದೆ. ಗಂಡನ ಮನೆಗೆ ಕಾಲಿಟ್ಟ ನವವಧುವೊಬ್ಬಳು, ಬಟ್ಟೆ ಬದಲಾಯಿಸುವ ಮುನ್ನವೇ ವಿಚ್ಛೇದನ ಬೇಕು ಎಂದು ಪಟ್ಟು ಹಿಡಿದ ಘಟನೆ ನಡೆದಿದೆ.

Divorce – ಘಟನೆಯ ವಿವರ
ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯಲ್ಲಿ ಈ ಹೈಡ್ರಾಮಾ ನಡೆದಿದೆ. ಇಲ್ಲಿನ ಭಲೌನಿ ನಿವಾಸಿ ವಿಶಾಲ್ ಮಧೇಸಿಯಾ ಮತ್ತು ಸಾಲೆಂಪೂರ್ ಮೂಲದ ಯುವತಿ ಪೂಜಾ ಅವರ ವಿವಾಹ ನಿಶ್ಚಯವಾಗಿತ್ತು. ನವೆಂಬರ್ 25ರಂದು ಇಬ್ಬರ ಕುಟುಂಬಸ್ಥರು, ಬಂಧುಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಮದುವೆ ನೆರವೇರಿತ್ತು. ರಾತ್ರಿ 9 ಗಂಟೆಯ ಸುಮಾರಿಗೆ ಶುಭ ಮುಹೂರ್ತದಲ್ಲಿ ತಾಳಿ ಕಟ್ಟಿಸಿಕೊಂಡ ಪೂಜಾ, ಗಂಡನ ಮನೆಗೆ ಬಂದಿದ್ದಳು.
Divorce – ಅತ್ತೆ ಮನೆಯಲ್ಲಿ ನಡೆದಿದ್ದೇನು?
ಮದುವೆ ಮುಗಿಸಿ ಗಂಡನ ಮನೆಗೆ ಬಂದ ಸೊಸೆಗೆ ಅತ್ತೆ-ಮಾವ ಆರತಿ ಎತ್ತಿ ಅದ್ದೂರಿ ಸ್ವಾಗತ ಕೋರಿದರು. ಸಂಪ್ರದಾಯದಂತೆ ನವ ದಂಪತಿಯನ್ನು ಕೋಣೆಗೆ ಕಳುಹಿಸಲಾಯಿತು. ಆದರೆ, ಆ ಕೋಣೆಯೊಳಗೆ ವಧು ಕಳೆದಿದ್ದು ಕೇವಲ 20 ನಿಮಿಷ ಮಾತ್ರ! ಧಿಡೀರ್ ಎಂದು ಕೋಣೆಯಿಂದ ಹೊರಬಂದ ಪೂಜಾ, ನೇರವಾಗಿ ಅತ್ತೆ-ಮಾವನ ಹತ್ತಿರ ಹೋಗಿ, “ನನಗೆ ಈ ಸಂಬಂಧ ಇಷ್ಟವಿಲ್ಲ. ನಾನು ಇಲ್ಲಿ ಇರಲ್ಲ, ಈಗಲೇ ತವರಿಗೆ ಹೋಗುತ್ತೇನೆ. ದಯವಿಟ್ಟು ನನ್ನ ಪೋಷಕರಿಗೆ ಫೋನ್ ಮಾಡಿ” ಎಂದು ಬಾಂಬ್ ಸಿಡಿಸಿದಳು.
Divorce – ಶಾಕ್ ಆದ ಗಂಡನ ಮನೆಯವರು
ವಧುವಿನ ಮಾತು ಕೇಳಿ ಅಲ್ಲಿದ್ದವರೆಲ್ಲರೂ ಆಕೆ ತಮಾಷೆ ಮಾಡುತ್ತಿದ್ದಾಳೆ ಅಂದುಕೊಂಡರು. ಆದರೆ ಆಕೆ ಸೀರಿಯಸ್ ಆಗಿ ಹೇಳುತ್ತಿದ್ದಾಳೆ ಎಂದು ತಿಳಿದಾಗ ಎಲ್ಲರಿಗೂ ಆಘಾತವಾಯಿತು. ಪತಿ ವಿಶಾಲ್ ಎಷ್ಟೇ ಸಮಜಾಯಿಷಿ ನೀಡಿದರೂ ಆಕೆ ಕೇಳಲಿಲ್ಲ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ವಧುವಿನ ಪೋಷಕರು ಬರೋಬ್ಬರಿ 5 ಗಂಟೆಗಳ ಕಾಲ ಆಕೆಯನ್ನು ಒಪ್ಪಿಸಲು ಪ್ರಯತ್ನಿಸಿದರು. ಆದರೆ, “ನಾನು ಈ ಮನೆಯಲ್ಲಿ ಇರಲ್ಲ” ಎಂದು ಹಠ ಹಿಡಿದ ಆಕೆ, ಅದಕ್ಕೆ ಕಾರಣವೇನೆಂಬುದನ್ನು ಮಾತ್ರ ಬಾಯ್ಬಿಡಲಿಲ್ಲ. Read this also : ಪತ್ನಿಯ ನಿದ್ದೆಗೆ ಭಂಗ ಬರದಂತೆ 40 ನಿಮಿಷ ಪರದೆ ಹಿಡಿದು ಕುಳಿತ ಪತಿ: ಈ ಪ್ರೀತಿಗೆ ಫಿದಾ ಆದ ನೆಟ್ಟಿಗರು!

Divorce – ಅಂತ್ಯವಾಯಿತು ದಾಂಪತ್ಯ
ವಧು ತನ್ನ ನಿರ್ಧಾರದಿಂದ ಹಿಂದೆ ಸರಿಯದ ಕಾರಣ, ಅನಿವಾರ್ಯವಾಗಿ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಲಾಯಿತು. ಸುದೀರ್ಘ ಚರ್ಚೆಯ ನಂತರ ಇಬ್ಬರೂ ಬೇರೆಯಾಗಲು ನಿರ್ಧರಿಸಿ, ವಿಚ್ಛೇದನ ಪತ್ರಗಳಿಗೆ ಸಹಿ ಹಾಕಿದರು. ಕೇವಲ 20 ನಿಮಿಷಗಳ ದಾಂಪತ್ಯ ಜೀವನ ಅಲ್ಲಿಗೆ ಅಂತ್ಯವಾಯಿತು.
ಈ ಸುದ್ದಿ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, “ಇದು ಇನ್ಸ್ಟೆಂಟ್ ಡೆಲಿವರಿಗಿಂತಲೂ ವೇಗವಾಗಿ ನಡೆದ ಡಿವೋರ್ಸ್” ಎಂದು ನೆಟ್ಟಿಗರು ವ್ಯಂಗ್ಯವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಆಕೆ ಮದುವೆಯನ್ನು ಮುರಿಯಲು ಅಸಲಿ ಕಾರಣವೇನು ಎಂಬುದು ಮಾತ್ರ ಇನ್ನೂ ನಿಗೂಢವಾಗಿಯೇ ಉಳಿದಿದೆ.
